ಮಿಲ್ಟನ್, ಜಾನ್		
1608-74. ಪ್ರಸಿದ್ಧ ಇಂಗ್ಲಿಷ್ ಕವಿ. ಈತನ ಪ್ಯಾರಡೈಸ್ ಲಾಸ್ಟ್ ಲೋಕವಿಖ್ಯಾತ ಕೃತಿ; ಮಹಾಕಾವ್ಯ. ಲಂಡನ್ನಿನಲ್ಲಿ ಜನನ. ತಂದೆ ಜಾನ್ ನೊಟರಿ. ತಾಯಿ ಸಾರಾಜೆಫ್ರಿ. ಬಾಲ್ಯದಿಂದಲೇ ವಿಶೇಷವಾದ ಸಾಹಿತ್ಯಾಸಕ್ತಿ ಮತ್ತು ಓದುವ ಗೀಳು, ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಸ್ಕಾಚ್ ಭಾಷೆಗಳ ಜೊತೆಗೆ ಗ್ರೀಕ್, ಲ್ಯಾಟಿನ್ ಮತ್ತು ಹೀಬ್ರೂಭಾಷೆಗಳನ್ನು ಕಲಿತ. ಈತ ಹತ್ತನೆಯ ವಯಸ್ಸಿನಲ್ಲಿ ಕವನಗಳನ್ನು ರಚಿಸತೊಡಗಿದ. ಈತನಿಗೆ ಲ್ಯಾಟಿನ್ ಕಾವ್ಯವನ್ನು ಪರಿಚಯಿಸಿ ಆಸ್ಥೆ ಹುಟ್ಟಿಸಿದ ಮೊದಲು ಗುರು ತಾಮಸ್ ಯಂಗ್. ಹದಿನೈದನೆಯ ವಯಸ್ಸಿಗೆ ಕ್ರೈಸ್ತ ಸ್ತೋತ್ರಗೀತೆಗಳನ್ನು ಇಂಗ್ಲಿಷಿಗೆ ಭಾವಾನುವಾದ ಮಾಡಿದ. 1620ರಲ್ಲಿ ಸೇಂಟ್‍ಪಾಲ್ ಶಾಲೆಗೆ ಸೇರಿ 1625ರಲ್ಲಿ ಮೆಟ್ರಿಕ್ ಮುಗಿಸಿ ಕೇಂಬ್ರಿಜ್‍ನ ಕ್ರೈಸ್ಟ್ ಕಾಲೇಜ್ ಸೇರಿದ. 1629ರಲ್ಲಿ ಬಿ. ಎ. ಹಾಗೂ 1632ರಲ್ಲಿ ಎಂ. ಎ. ಪದವಿ ಪಡೆದ. ಕೇಂಬ್ರಿಜ್ ವಿದ್ಯಾರ್ಥಿ ಜೀವನಾನುಭವಗಳು ಆಗ ರಚಿಸಿದ ಲ್ಯಾಟಿನ್ ಕವಿತೆಗಳಲ್ಲೂ ಕವಿಯ ವಿದ್ವತ್ತು, ವಾದವೈಖರಿ ಏಳು ಲ್ಯಾಟಿನ್ ಉಪನ್ಯಾಸಗಳಲ್ಲೂ ಅಭಿವ್ಯಕ್ತವಾಗಿವೆ. ಚೆಲುವನೂ ಕೋಮಲಸ್ವಭಾವದನೂ ಆಗಿದ್ದ ಕವಿಗೆ ಕಾಲೇಜಿನ ಮಹಿಳಾಮಣಿ ಎಂಬ ಅಡ್ಡಹೆಸರು ಬಿದ್ದಿತ್ತು. ಗಂಭೀರವಾದ ನಡೆ ನುಡಿ, ಶುದ್ಧವಾದ ಮನಸ್ಸು, ಪ್ರಗಾಢವಾದ ಪಾಂಡಿತ್ಯ ಇದ್ದ ಮಿಲ್ಟನ್ ಎಲ್ಲರ ಗೌರವಕ್ಕೂ ಪಾತ್ರನಾಗಿದ್ದ, ಪ್ಲೇಟೋನ ಸಿದ್ಧಾಂತ, ಕ್ರೈಸ್ತ ಸಂದೇಶ, ಬೇಕನ್ ವಿಚಾರ ಧಾರೆ, ರಿನೇಸಾನ್ಸ್, ಮಾನವತಾವಾದ ಹಾಗೂ ವೈಚಾರಿಕತೆ ಇವೆಲ್ಲವುಗಳ ಪ್ರಭಾವದಿಂದ ಕವಿಯ ವ್ಯಕ್ತಿತ್ವ ರೂಪುಗೊಂಡಿತು. ಮಿಲ್ಟನ್ ಮೊದಲು ಬರೆದ ಖಂಡಕಾವ್ಯ. ಸಾನೆಟ್ಟುಗಳೆಲ್ಲ ಲ್ಯಾಟಿನ್ ಭಾಷೆಯಲ್ಲಿದೆ. ಆನ್ ದಿ ಮಾರ್ನಿಂಗ್ ಆಫ್ ಕ್ರೈಸ್ಟ್ ನೇಟಿವಿಟಿ (1628) ಎಂಬ ಮೊದಲ ಇಂಗ್ಲಿಷ್ ಪದ್ಯ ಬರೆದಾಗ ಕವಿಗೆ 21 ವರ್ಷ. ಈ ಕವನ ಕವಿಯ ಉಜ್ಜ್ವಲ ಕಾವ್ಯಜೀವನದ ಭವಿಷ್ಯ ಸೂಚಕವಾಯಿತು. 1631ರಲ್ಲಿ ಲಾ ಅಲೆಗ್ರೊ ಮತ್ತು ಇಲ್‍ಪೆನ್ಸ್‍ರೋಸೊ ಎಂಬ ಅವಳಿ ಕವನಗಳನ್ನು ರಚಿಸಿದ. ಇದರಲ್ಲಿ ಒಂದು ಬಹಿರ್ಮುಖ ಆಸಕ್ತಿಯ ಹರ್ಷಸ್ವಭಾವದ ವ್ಯಕ್ತಿಯ ಚಿತ್ರವನ್ನೂ ಇನ್ನೊಂದು ಅಂತರ್ಮುಖಿಯಾದ ಗಂಭೀರ ಚಿಂತನಶೀಲ ವ್ಯಕ್ತಿಯ ಚಿತ್ರವನ್ನೂ ಕೊಡುತ್ತದೆ. ಸಂಕೀರ್ಣತೆಯ ಜೊತೆಗೆ ಸಾದೃಶ್ಯ- ವೈದ್ಯಶ್ಯಗಳ ಕಲಾತ್ಮಕ ರಚನೆ, ಅಪೂರ್ವವಾದ ಲಾವಣ್ಯಸುಭಗತೆಗಳಿಂದ ಕೂಡಿರುವ ಈ ಕವನಗಳು ಆಂಗ್ಲಭಾವಗೀತಾ ಸಾಹಿತ್ಯದಲ್ಲಿ ಸುಂದರ ಅಸದೃಶ ಕವಿತೆಗಳು. ಇವುಗಳ ಲಾಲಿತ್ಯ. ಸಂಗೀತದಿಂಪು ಮನಸೆಳೆಯುತ್ತವೆ. ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಬರೆದ ಆನ್ ಹಿಸ್ ಬೀಯಿಂಗ್ ಆರೈವ್ಹ್ ಟು ದಿ ಏಜ್ ಆಫ್ ಟ್ವೆಂಟಿ ತ್ರೀ ಎಂಬ ಸಾನೆಟ್ ಕವಿಯ ಶಗಿನ ಮನಸ್ಥಿತಿಯನ್ನೂ ಜೀವನ ದೃಷ್ಟಿಯನ್ನೂ ಪ್ರತಿಬಿಂಬಸುತ್ತದೆ.

ಮೇರಿ ಪಾವೆಲ್‍ಳೊಂದಿಗಾದ ಮಿಲ್ಪನ್‍ನ ವಿವಾಹ ಸುಖಮಯವಾಗಿರಲಿಲ್ಲ. ದಾಂಪತ್ಯವಿರಸದಿಂದ ಕೆಲವು ಕಾಲ ಇಬ್ಬರೂ ದೂರವಿದ್ದರು. ವಿವಾಹವಿಚ್ಫೇದನ ಕುರಿತು ಮಿಲ್ಟನ್ ಒಂದು ಲೇಖನವನ್ನೇ ಬರೆದ. ಮಿತ್ರರ ಮಧ್ಯಸ್ತಿಕೆಯಿಂದ ಗಂಡಹೆಂಡಿರು ರಾಜಿಯಾದರು. ಮೂವರು ಪುತ್ರಿಯರಾದರು. ಒಬ್ಬನೇ ಮಗ ಹುಟ್ಟಿದ ಕೆಲವು ತಿಂಗಳಲ್ಲೇ ತೀರಿಹೋದ. ಮೂರನೆಯ ಹೆಣ್ಣುಮಗುವನ್ನು ಹೆತ್ತು ಪಾವೆಲ್ ತೀರಿಹೋದಳು.

ಮಿಲ್ಟನ್ ಸಾರ್ವಜನಿಕ ಜೀವನಕ್ಕೆ ಕಾಲಿಡುವ ಮುನ್ನ ಬರೆದ ಕೃತಿಗಳಲ್ಲಿ ಕೋಮಸ್ (1634) ಎಂಬ ಮೊಗವಾಡದ ನಾಟಕ ಲಿಸಿಡಾಸ್ ಎಂಬ ಶೋಕಗೀತೆ (ಎಲಿಜಿ) ಬಹುಮುಖ್ಯವಾದವು. ಕೋಮಸ್ ಸೊಗಸಾದ ಕಾವ್ಯನಾಟಕ. ಸಂಗೀತನೃತ್ಯಗಳೆರಡೂ ಸೇರಿದ ಈ ನಾಟಕದ ವಸ್ತು ಒಳಿತು-ಕೆಡಕುಗಳ ನಿರಂತರ ಸಮರ. ಕೊಮಸ್ ಪಾತ್ರಚಿತ್ರಣದಲ್ಲಿ ಸೇಟನ್‍ನ ಪಾತ್ರ ಸೃಷ್ಟಿಯ ಪೂರ್ವಸೂಚನೆಯನ್ನು ಗುರುತಿಸಬಹುದು. ಕೊಮಸ್ ಮುಗ್ದ ವಯಸ್ಸಿನಲ್ಲಿ ರಚಿಸಿದ ಕೃತಿಯಾದರೆ ಲಿಸಿಡಾಸ್ ಅನುಭವತುಂಬಿದ ಹಾಡು. ಕವಿಯ ಕಾಲೇಜ್ ಸಹಪಾಠಿ ಎಡ್ವರ್ಡ್‍ಕಿಂಗ್ 1637ರಲ್ಲಿ ಐರಿಷ್ ಕಡಲಲ್ಲಿ ಯಾನಿಸುತ್ತಿದ್ದಾಗ ಹಡಗು ಒಡೆದು ಅಕಾಲಮರಣಕ್ಕೆ ತುತ್ತಾದ. ಅವನ ನೆನಪಿಗೆ ಲ್ಯಾಟಿನ್ ಗ್ರೀಕ್ ಶ್ರದ್ಧಾಂಜಲಿ ಸಂಚಿಕೆಗೆ ಕವಿ ಈ ಶೋಕಗೀತೆ ಬರೆದ. ಎಲಿಜಿ ಮಾದರಿಯ ಸರ್ವಲಕ್ಷಣಗಳೂ ಇರುವ ಈ ಗೀತೆ ಒಂದು ಉತ್ಕಷÀ್ಟ ಕವಿತೆ. ಇದರಲ್ಲಿ ವ್ಯಕ್ತವಾಗಿರುವ ಮಿಲ್ಟನ್‍ನ ವಿಚಾರ ಸರಣಿ ಅರ್ಥ ಪೂರ್ಣವಾದುದು. ರಿನೇಸಾನ್ಸ್ ಮತ್ತು ರಿಫಾರ್ಮೇಷನ್ ಎರಡರ ಪ್ರಭಾವದಲ್ಲಿ ವಿಕಾಸವಾದ ಮಿಲ್ಟನ್‍ನ ವೈಚಾರಿಕತೆ ಮತ್ತು ಜೀವನದೃಷ್ಟಿ ಈ ಕವನದಲ್ಲಿ ವ್ಯಕ್ತವಾಗಿವೆ.

1638-39ರಲ್ಲಿ ಮಾಡಿದ ಇಟಲಿ ಪ್ರವಾಸದಿಂದ ಕವಿಯ ಆತ್ಮವಿಶ್ವಾಸ ಹೆಚ್ಚಿತು. ಫ್ಲಾರೆನ್ಸ್, ನೇಪಲ್ಸ್ ಮತ್ತು ರೋಮ್ ನಗರಗಳಲ್ಲಿ ಸಾಹಿತಿಗಳು ಸಾಹಿತ್ಯಾಭಿಮಾನಿಗಳೂ ಕವಿಗೆ ಗೌರವ ಸನ್ಮಾನಗಳನ್ನು ನೀಡಿದರು.

ನಿರಂಕುಶ ಪ್ರಭುತ್ವವನ್ನು ಪ್ರತಿಭಟಿಸಿ ಪ್ರಜಾಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಲೇಖನಗಳಲ್ಲಿ ತೊಡಗಿದ ಕವಿಯ ಯೌವನೋತ್ತರದ ಇಪ್ಪತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಗದ್ಯಕೃತಿಗಳೇ ಹೆಚ್ಚಾಗಿ ರಚಿತವಾದುವು. ಕಾವ್ಯಕೃತಿಗಳು ಕೇವಲ 17; ಉಳಿದವು ಸಾನೆಟ್ಟುಗಳು ಮತ್ತು ಸ್ತೋತ್ರಗೀತೆಗಳು. ಮಿಲ್ಟನ್ ರಚಿಸಿರುವ ಕೆಲವು ಪಂಡಿತರು ಮಾತ್ರ ಓದುತ್ತಾರೆ. ಕಾವ್ಯಕೃತಿಗಳು ಒಂದು ವೇಳೆ ಇಲ್ಲದೆ ಇದ್ದಿದ್ದರೂ ಮಿಲ್ಟನ್ನನ ಕೀರ್ತಿಯನ್ನು ಸಾರಲು ಈ ಗದ್ಯಕೃತಿಗಳಲ್ಲಿ ಬರುವ ಅವನ ಧಾರ್ಮಿಕ, ರಾಜಕೀಯ ವಿಚಾರ ಸರಣಿ. ಸಿದ್ಧಾಂತಗಳು, ಕನಸುಗಳು, ಭ್ರಮನಿರಸಗಳು ಇಷ್ಟೆ ಸಾಕಾಗಿತ್ತು. ಅವುಗಳ ಮೌಲ್ಯ ಪ್ರಾಮುಖ್ಯ ಈ ಹೊತ್ತಿಗೂ ಪ್ರಸ್ತುತವಾಗಿದೆ. ಏರಿಯೊಪೇಜಿಟಿಕಾ (1644) ಎಂಬ ಪ್ರಬಂಧ ವ್ಯಕ್ತಿ ಸ್ವಾತಂತ್ರ್ಯದ ಒಂದು ಕ್ಲಾಸಿಕ್ ದಾಖಲೆ. ಅಫ್ ಎಜ್ಯುಕೇಷನ್ ಇನ್ನೊಂದು ಉತÀ್ಕøಷ್ಟ ಲೇಖನ. 

ಪ್ರಜಾಸರ್ಕಾರ ಈತನನ್ನು ರಾಜ್ಯಸಮಿತಿಯ ವಿದೇಶಿಭಾಷೆಗಳ ಕಾರ್ಯದರ್ಶಿಯಾಗಿ ನೇಮಿಸಿತು (1649). 1651 ರಲ್ಲಿ ಕಾಮೆನ್‍ವೆಲ್ತ್ ಪತ್ರಿಕೆಯ ಮೇಲ್ವಿಚಾರಕ ಸಂಪಾದಕನಾದ. 1651-52ರ ವೇಳೆಗೆ ವಯಸ್ಸು ನಲವತ್ತಮೂರಾಗಿದ್ದಾಗ ಕಣ್ಣಿನ, ತೊಂದರೆ ಹೆಚ್ಚಾಗಿ ಸಂಪೂರ್ಣಕುರುಡನಾದ. 1659ರ ತನಕ ರಾಜ್ಯದ ವಿದೇಶಿ ಪತ್ರವ್ಯವಹಾರದ ಭಾಷಾಂತರಕಾರನಾಗಿ ಸೇವೆಯಲ್ಲಿ ಮುಂದುವರಿದ. ಡಿ ಡಾಕ್ಟ್ರಿನಾ ಕ್ರಿಸ್ಟಿಯಾನಾ (ಕ್ರೈಸ್ತಧರ್ಮ ಸಿದ್ಧಾಂತ) ಒಂದು ದೀರ್ಘಪ್ರಬಂಧ. ಇದರಲ್ಲಿ ಕ್ರಾಂತಿಕಾರಿ ಧಾರ್ಮಿಕ ತತ್ತ್ವ ವಿಚಾರಗಳು ವಿಸ್ತಾರವಾಗಿಯೂ ದೃಢವಾಗಿಯೂ ಮಂಡಿಸಲ್ಪಟ್ಟಿವೆ.

1660-74 ಮಹತ್ತರ ರಾಜಕೀಯ ಬದಲಾವಣೆಯ ಕಾಲ. ರಾಜನ ಪ್ರಭುತ್ವ ಮತ್ತೆ ಸ್ಥಾಪಿತವಾಗಿ ಹಿಂದೆ ರಾಜನ ಹತ್ಯೆಯನ್ನು ಸಮರ್ಥಿಸಿದ್ದ ಮಿಲ್ಟನ್ನನಿಗೆ ಅಪಾಯದ ಕಾಲ ಒದಗಿತು. 1660ರಲ್ಲಿ ಮಿಲ್ಟನ್ನನನ್ನು ಬಂಧಿಸುವಂತೆ ರಾಜಾಜ್ಞೆ ಹೊರಟಿತು. ಮರಣದಂಡನೆಯ ಭಯ ಇತ್ತು. ಮಿತ್ರರು ಕೆಲವು ಕಾಲ ಬಚ್ಚಿಟ್ಟರೂ ಗೋಪ್ಯ ಬಯಲಾಗಿ ಕವಿಯನ್ನು ಹಿಡಿದು ಸೆರೆಯಲ್ಲಿಟ್ಟರು. ಕವಿಕುರುಡ, ಸಾತ್ವಿಕ, ಪ್ರತಿಭಾವಂತ, ಆತನಿಂದ ಏನೂ ಭಯವಿಲ್ಲ ಎಂದು ಸರ್‍ವಿಲಿಯಮ್ ಡಾವ್ನೆಂಡ್ ಮುಂತಾದ ಅಭಿಮಾನಿಗಳು ರಾಜನ ಮನವೊಲಿಸಿ ಬಿಡುಗಡೆ ಮಾಡಿಸಿದರು ಎಂದು ಕತೆಗಳಿವೆ. ಮೊದಲಿದ್ದ ಹಣ, ಅಧಿಕಾರ, ಸುಖ ಸೌಕರ್ಯಗಳೆಲ್ಲವನ್ನೂ ಕಳೆದುಕೊಂಡು ಕಷ್ಟ ಕಾರ್ಪಣ್ಯಗಳ ಜೀವನವನ್ನು ನಡೆಸಬೇಕಾಯಿತು. ಆದರೆ ಅದು ನೆಮ್ಮದಿಯ ಮನಶ್ಯಾಂತಿಯ ಕಾಲ. ದೈವ ಚಿಂತನೆ, ಧ್ಯಾನ ಪ್ರಾರ್ಥನೆ ಕಾವ್ಯರಚನೆಗಳಲ್ಲಿ ಕವಿ ತೊಡಗಿದ. 1663ರಲ್ಲಿ 20 ವರ್ಷದ ಎಲಿಜಬೆತ್ ಮಿನ್ಷಲ್‍ಳೊಂದಿಗೆ ಕವಿಯ ಮೂರನೆಯ ಮದುವೆ ಆಯಿತು. ಆಕೆ ಒಳ್ಳೆಯ ಪತ್ನಿ ಎನಿಸಿದಳು.

1655ರಲ್ಲಿ ಆರಂಭವಾಗಿದ್ದ ಮಹಾಕಾವ್ಯ ಪ್ಯಾರಡೈಸ್ ಲಾಸ್ಟ್ ರಚನೆ ಮುಂದುವರಿಯಿತು. ಮಗಳು ಡಿಬೋರಾ, ತಮ್ಮನ ಮಕ್ಕಳು ಇಲ್ಲವೆ ಮಿತ್ರರು ಕವಿ ರಚಿಸಿ ಬಾಯಲ್ಲಿ ಹೇಳುತ್ತಿದ್ದ ಕಾವ್ಯದ ಸಾಲುಗಳನ್ನು ಬರೆದು ಕೊಳ್ಳುತ್ತಿದ್ದರು. ಬರೆದದ್ದನ್ನು ಓದಿಸಿ, ತಿದ್ದಿಸಿ ಪ್ರತಿಮಾಡಿಸುವುದು ಕವಿಯ ನಿತ್ಯದ ಪರಿಪಾಠವಾಯಿತು. 1665ರಲ್ಲಿ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯ ಪೂರ್ಣಗೊಂಡಿತು. 167ರಲ್ಲಿ ಹನ್ನೆರಡು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಮಹಾಕಾವ್ಯಕ್ಕೆ ಪ್ರಕಾಶಕರಿಂದ ಕವಿಗೆ ಸಂದ ಸಂಭಾವನೆ ಕೇವಲ ಹತ್ತು ಪೌಂಡ್. 1674ರಲ್ಲಿ ಕೆಲವು ತಿದ್ದುಪಾಟು. ಮಾರ್ಪಾಟುಗಳೊಂದಿಗೆ ಇದರ ಎರಡನೆಯ ಆವೃತ್ತಿ ಹೊರಬಂದಿತು. 1671ರ ವೇಳೆಗೆ ಈ ಮಹಾಕಾವ್ಯದ ಉತ್ತರ ಭಾಗವಾದ ಪ್ಯಾರಡೈಸ್ ರೀಗೇಯ್ನ್‍ಡ್ (ನಾಲ್ಕು ಸಂಪುಟ) ಕಾವ್ಯವೂ ಸ್ಯಾಮ್ಸನ್ ಆಗೋನಿಸ್ಟೀಸ್ ಎಂಬ ನಾಟಕವನ್ನೂ ಬರೆದು ಮುಗಿಸಿದ. 1673ರಲ್ಲಿ ಕವನಗಳ ಸಂಗ್ರಹದ ಎರಡನೆಯ ಆವೃತ್ತಿಯನ್ನು ತಂದ. ಬ್ರಿಟನ್ನಿನ ಚರಿತ್ರೆ (1670), ಲ್ಯಾಟಿನ್ ಗ್ರಾಮರ್, ಲಾಜಿಕ್ (1672)ಮತ್ತು ಅಪೂರ್ಣವಾಗಿ ಉಳಿದ ಡಿಕ್ಷನರಿ ಇತರ ಕೃತಿಗಳು. ರಾಜಕೀಯ ಪಕ್ಷ. ಧಾರ್ಮಿಕ ಪಂಗಡಗಳಿಗೆ ಅತೀತವಾಗಿ ಹೃದಯದಲ್ಲಿ ಮತ್ತು ಬದುಕಿನಲ್ಲಿ ಕ್ರೈಸ್ತಧರ್ಮದ ತಿರುಳನ್ನು ಮಾತ್ರ ತುಂಬಿಕೊಂಡ ಮಿಲ್ಟನ್ ಮಹಾಕವಿ 1674 ನವೆಂಬರ್ 8ರಂದು ಆರುವತ್ತಾರನೆಯ ವಯಸ್ಸಿನಲ್ಲಿ ಮರಣ ಹೊಂದಿದ. ಸೇಂಟ್‍ಗೈಲ್ಸ್‍ನ ಕ್ರಿಪ್ಲ್‍ಗೇಟಿನಲ್ಲಿ ಈತನನ್ನು ಸಮಾಧಿ ಮಾಡಲಾಯಿತು.

ಪ್ಯಾರಡೈಸ್ ಲಾಸ್ಟ್ ಒಂದು ಮಹಾಕಾವ್ಯ; ಮಹೋನ್ನತ ಕೃತಿ. ಈ ಕಾವ್ಯ ರಚನೆಗೆ ಮುಂಚೆ ಈ ವಸ್ತುವಿಗೆ ಸಂವಾದಿಯಾದ ಅನೇಕ ಕಥಾ ವಸ್ತುಗಳು ಕವಿಯ ಮನಸ್ಸಿನಲ್ಲಿ ಸುಳಿದಿದ್ದುವು. ಬೈಬಲ್ ಮತ್ತು ಇತಿಹಾಸಗಳಿಂದ ನಾಟಕರೂಪದಲ್ಲಿ ಬರೆಯಲೆಂದು ನೂರು ಘಟನೆಗಳನ್ನು ಗುರುತುಮಾಡಿ ಇಟ್ಟಿದ್ದ. ತನ್ನ ಕಲ್ಪನೆಯ ಬೀಸಿಗೆ ಪರಿಮಿತವಾದ ನಾಟಕರಂಗ ಸಾಕಾಗದೆಂದು ಭಾವಿಸಿ ಮಹಾಕಾವ್ಯದ ಹರಹನ್ನು ಆರಿಸಿಕೊಂಡ.

ಸೃಷ್ಟಿಯ ಆದಿ, ಮಾನವನ ಸ್ವರ್ಗಚ್ಯುತಿ, ಮೂರುಲೋಕಗಳಲ್ಲಿ ಸೇಟನ್‍ನ ಪಾತ್ರ ಇವನ್ನು ಕುರಿತು ಕಾಲ್ಪನಿಕ ಕಥನ. ಧಾರ್ಮಿಕ ವ್ಯಾಖ್ಯಾನಗಳ ಸಾಹಿತ್ಯ ಕೃತಿಗಳು ಬೇಕಾದಷ್ಟು ಬಂದಿದ್ದವು. ಇದೇ ವಸ್ತುವನ್ನು ಕುರಿತು ಶಕ್ತಿಯುತ ಕಾವ್ಯ: ಹ್ಯೂಗೊನಾಟ್ ಗಿಲ್ಲಾಮೆ ಡಿ ಬಾರ್ಟಾಸ್ ಬರೆದು ಜೋಷು ವಾಸಿಲ್ವೇಸ್ಟರ್ ಇಂಗ್ಲಿಷಿಗೆ ಭಾಷಾಂತರಿಸಿದ ದಿ ಡಿವೈನ್ ವೀಕ್ಸ್ ಅಂಡ್ ವಕ್ರ್ಸ್ (1605) ಮಿಲ್ಟನ್ ಆದಿಯಾಗಿ ಬಹುಜನವಾಚಕರ ಮನಸ್ಸನ್ನು ಗೆದ್ದಿತ್ತು. ಗ್ರೋಟಿಯಸ್‍ನ ಅಡಮಸ್ ಎಕ್ಸಲ್ (1601) ಎಂಬ ನಾಟಕವೂ ಜನಪ್ರಿಯವಾಗಿತ್ತು. ಇಂಥ ಪರಿಚಿತ ವಸ್ತುವನ್ನೇ ತೆಗೆದುಕೊಂಡು ಕಾವ್ಯರಚನೆ ಮಾಡಿದರೂ ಮಿಲ್ಟನ್ನನ ಸೃಜನಶೀಲ ಪ್ರತಿಭೆ. ಸ್ವಂತಿಕೆಗಳ ಮುದ್ರೆ ಕಾವ್ಯದ ಮೇಲೆ ಸ್ಪಷ್ಟವಾಗಿ ಬಿದ್ದಿದೆ. ಹೋಮರ್ ಮತ್ತು ವರ್ಜಿಲ್ ಇಬ್ಬರಿಂದಲೂ ಸ್ಪೂರ್ತಿಪಡೆದ ಕವಿ ಭಾಷೆ, ಶೈಲಿ ಮತ್ತು ಮಹಾಕಾವ್ಯದ ಲಕ್ಷಣಗಳಲ್ಲಿ ತನ್ನ ವೈಶಿಷ್ಯ್ಯ ಮೆರೆದಿದ್ದಾನೆ. ಅನಂತ ವಿಶ್ವಚೈತನ್ಯವನ್ನು ಕೊಂಡಾಡಿ, ಆ ದೇವರ ಲೀಲೆಗಳನ್ನು ಸಮರ್ಥಿಸಿ ಮಾನವರಿಗೆ ಅವನ್ನು ತಿಳಿಸಿಕೊಡುವುದೇ ತನ್ನ ಕಾವ್ಯದ ಉದ್ದೇಶವೆಂದು ಕವಿ ಮೊದಲಲ್ಲೇ ಘೋಷಿಸುತ್ತಾನೆ.

ದೈವೀಸಮ ತೇಜಸ್ಸುಳ್ಳನಾಗಿದ್ದರೂ ಅಹಂಕಾರವಶನಾಗಿ ದೇವರ ವಿರುದ್ಧ ಬಂಡೆದ್ದು ಸಮರದಲ್ಲಿ ಸೋತು ನರಕದ ಕತ್ತಲ ಲೋಕಕ್ಕೆ ಬಿದ್ದು ದುಷ್ಟಶಕ್ತಿಗಳನ್ನು ಸಂಘಟಿಸಿ ಪ್ರತೀಕಾರಕ್ಕೆ ಹೊರಡುವ ಸೇಟ್‍ನ್‍ನ ಪಾತ್ರಚಿತ್ರಣ ಮೊದಲ ಎರಡು ಸಂಪುಟಗಳನ್ನು ತುಂಬಿದೆ. ನರಕಸಭೆ, ದುಷ್ಟಶಕ್ತಿಗಳು ಬೆಂಬಲಿಸಿ ಮಾಡುವ ಭಾಷಣಗಳು,. ಸೇಟನ್‍ನ ಉಜ್ವಲ ಭಾಷಣ, ವಾಗ್ವಾದ. ಚರ್ಚೆಗಳನ್ನು ನಿರೂಪಿಸುವ ಕಾವ್ಯದ ಈ ಭಾಗ ಅತ್ಯುತ್ಕøಷ್ಟ ಕಾವ್ಯನಿರ್ಮಿತಿಯಾಗಿದೆ. ಇನ್ನಾವ ಮಹಾಕಾವ್ಯದಲ್ಲೂ ಇದಕ್ಕೆ ಸರಿಸಾಟಿಯಾಗಬಲ್ಲ ವರ್ಣನೆ. ನಿರೂಪಣೆ ಬಂದಿಲ್ಲ.

ಭಗವಂತನ ಅಜ್ಞೆಯ ಮೊತ್ತಮೊದಲ ಉಲ್ಲಂಘನೆಗೆ ಶಿಕ್ಷೆ ಪಡೆದ ಪ್ರಥಮ ಮಾನವರಾದ ಅಡಮ್ ಮತ್ತು ಈವ್ ಈಡನ್‍ವನದಿಂದ ಉಚ್ಚಾಟಿತರಾಗಿ ಮತ್ರ್ಯಲೋಕಕ್ಕೆ ಬೀಳುತ್ತಾರೆ. ಸೇಟನ್‍ನ ಪ್ರಭಾವಕ್ಕೆ ಒಳಗಾಗಿ ವಿವೇಕಹೀನರಾಗಿ ಮಾಡಿದ ತಪ್ಪಿಗೆ ಪರಿಪೂರ್ಣ ಆನಂದಸ್ಥಿತಿ ಕಳೆದುಕೊಂಡು ದುಃಖಪೂರಿತವಾದ ಮತ್ರ್ಯದ ಬದುಕನ್ನು ಆರಂಭಿಸುತ್ತಾರೆ. ಪಾಪದ ಫಲ ಈ ಕೊನೆಯಿಲ್ಲದ ದುಃಖ. ಮನುಕುಲಕ್ಕೆ ಮುಂದೆ ಒದಗಲಿರುವ ಎಲ್ಲ ಸಂಕಟ, ಸಮಸ್ಯೆಗಳ, ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರ, ಧರ್ಮಬೋಧಕರ ನೈತಿಕಪತನ ಮುಂತಾದ ಭವಿಷ್ಯದ ಘಟನೆಗಳನ್ನು ದೇವಸೇವಕ ಮೈಖೇಲ್, ಅಡಮನಿಗೆ ದೃಶ್ಯಾವಳಿಯ ರೂಪದಲ್ಲಿ ತೋರಿಸುತ್ತಾನೆ.

ಅಸುರೀ ಶಕ್ತಿಯನ್ನಾವರಿಸಿದ ಮಾಯೆಯ ಸಮಾಂತರ ಮಾಯೆ ಅಡಮ್ ಮತ್ತು ಈವ್‍ರನ್ನು ಅವರಿಸಿ ಈ ಪ್ರಮಾದವಾಗುತ್ತದೆ. ಪಶ್ಚಾತ್ತಾಪ ಮತ್ತು ಭಗವಂತನ ಕರುಣೆಗಳಿಂದ ಪರಿಶುದ್ಧರಾಗಿ ಇಬ್ಬರೂ ಮತ್ತೆ ಸ್ವರ್ಗವನ್ನು ಗಳಿಸುವುದು. ದೇವಪುತ್ರ ಯೇಸು ಭೂಮಿಗೆ ಬಂದು ಪ್ರೇಮದಿಂದ ಲೋಕೋದ್ಧಾರ ಮಾಡುವುದು ಕಾವ್ಯದ ಉತ್ತರ ಭಾಗದಲ್ಲಿ ಬರುತ್ತದೆ. ಈ ಕಾವ್ಯದಲ್ಲಿ ಸೇಟನ್‍ನ ಪಾತ್ರ ಅತ್ಯುದ್ಭುತವಾಗಿ ಚಿತ್ರಿತವಾಗಿದೆ. ಮಹಾನಾಯಕನ ಸರ್ವಶಕ್ತಿ, ಸಾಮಥ್ರ್ಯ, ಲಕ್ಷಣಗಳು ಇದ್ದರೂ ದುಷ್ಟಸ್ವಭಾವ, ಸ್ವಾರ್ಥ, ಅಹಂಕಾರಗಳಿಂದ ಅವು ವಿಕೃತಗೊಂಡು ದುರುದ್ದೇಶಕ್ಕೆ ಬಳಕೆಯಾಗುತ್ತವೆ. ನರಕದಲ್ಲಿ ಈತನ ಶೌರ್ಯ ಪ್ರತಾಪಗಳು ಮಹತ್ತಾಗಿ ಕಂಡರೂ ಹೊರಗೆ ತೇಜೋಹೀನವಾಗುತ್ತವೆ. ಅಚಲವೂ ಅಪ್ರತಿಹತವೂ ಅದ ಭಗವತ್ ಶಕ್ತಿಯೆದುರು ಸೇಟನ್ ಮತ್ತು ಅವನ ಅನುಯಾಯಿಗಳ ಸಂಚು ಕ್ಷುದ್ರವಾಗಿ ಕಾಣುತ್ತದೆ. ಮಾನವನ ಪತನದಲ್ಲಿ ಶಾಶ್ವತಗೊಳಿಸಲು ನರಕದ ಸಭೆಯಲ್ಲಿ ಪಣತೊಟ್ಟು ಸೇಟನ್ ಭೂಮಿಗಿಳಿಯುವ ಅಪಾಯದ ಪ್ರವಾಸವನ್ನು ಕೈಗೊಳ್ಳುತ್ತಾನೆ. ಹಾಗೆಯೇ ದೇವಸಭೆಯಲ್ಲಿ ದೇವಪುತ್ರ ಮಾನವೋದ್ಧಾರಕ್ಕಾಗಿ ದೀಕ್ಷೆ ತೊಟ್ಟು ಭೂಮಿಯನ್ನು ಅವತರಿಸಲು ಸಿದ್ಧನಾಗುತ್ತಾನೆ. ದೈವೀ ಮತ್ತು ಅಸುರೀಶಕ್ತಿಗಳ ಸೆಳೆತಗಳ ನಡುವೆ ಸಿಕ್ಕ ಮಾನವನ ಬದುಕಿನ ಕಥೆ ನಡೆಯತೊಡಗುತ್ತದೆ. ಒಳಿತು-ಕೆಡಕುಗಳ ಈ ಸಂಘರ್ಷ ಪ್ರತಿಯೊಬ್ಬರ ಅಂತರಂಗದಲ್ಲೂ ನಡೆವ ನಿತ್ಯ ನಾಟಕ. ಪ್ಯಾರಡೈಸ್ ಲಾಸ್ಟ್ ಕಾವ್ಯಪ್ರತಿಮೆ ಅಷ್ಟೆ..

ಕಾವ್ಯದ ಉದ್ದಕ್ಕೂ ಕವಿಯ ಕಲ್ಪನಾಶಕ್ತಿ, ಕಲಾತ್ಮಕಬಂಧ ಕಾಣುತ್ತವೆ. ಸಾದೃಶ ವೆದೃಶ್ಯಗಳ ಸಾಲುಚಿತ್ರಗಳನ್ನೂ ಸನ್ನಿವೇಶಗಳನ್ನೂ ಮಿಲ್ಟನ್ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಭಾಷೆ ಸಂಗೀತದ ಮಧುರನಾದದಂತೆ ಹರಿಯುತ್ತದೆ. ಕವಿಗೆ ಮುಕ್ತಛಂದದ ಸಂಪೂರ್ಣ ಹಿಡಿತ ಇದೆ. ಮಾತ್ರಾಜೋಡಣೆಯ ವೈವಿಧ್ಯದಿಂದಾಗಿ ಕಾವ್ಯ ಎಲ್ಲೂ ಏಕತಾನದ ಬೇಸರವನ್ನು ತರುವುದಿಲ್ಲ. ವಿಚಾರ ಸರಣಿಯಲ್ಲಿ ಪ್ರಾಚೀನ ಹಾಗೂ ನೂತನ ದೃಷ್ಟಿಗಳ ಸಮನ್ವಯವಿದೆ. ಲ್ಯಾಟಿನ್ ಭೂಯಿಷ್ಠ ಆಡಂಬರದ ಶೈಲಿ ಎಂಬ ಆಕ್ಷೇಪವಿದ್ದರೂ ಲ್ಯಾಟಿನ್ ಪದಗಳ ಬಳಕೆಯಿಂದ ಕವಿ ಸಾಧಿಸಿರುವ ಶಕ್ತಿ, ಸಂಕ್ಷಿಪ್ತತೆ, ಗಾಂಭೀರ್ಯಗಳನ್ನು ಕಡೆಗಣಿಸಲಾಗದು. ಐತಿಹಾಸಿಕ, ಭೌಗೋಳಿಕ ಮತ್ತು ಪೌರಾಣಿಕ ವೃತ್ತಾಂತಗಳಿಂದಲೂ ಮಹೋಪಮೆಗಳಿಂದಲೂ ಕಾವ್ಯ ಸಮೃದ್ಧವಾಗಿದೆ.

ಪ್ಯಾರಡೈಸ್ ರೀಗೆಯ್ನ್‍ಡ್ ಕಾವ್ಯ ಬಲುಮಟ್ಟಿಗೆ ನಾಟಕ. ದೇವರ ಪ್ರೀತಿಯ ಮಗ ಕ್ರಿಸ್ತ ಆಡಮ್‍ನ ಪ್ರತೀಕ ಮಾನವನಾಗಿ ಹುಟ್ಟಿ ಕಳೆದುಕೊಂಡ ಸ್ವರ್ಗವನ್ನು ಪುನಃ ಪಡೆಯುವ ಮಾರ್ಗವನ್ನು ಮಾನವರಿಗೆ ತೋರಿಸುವ ಕಥೆ ಇದರ ವಸ್ತು ಕ್ರಿಸ್ತ ಸಿಲುಬೆಗೇರುವ ಪ್ರಸಂಗ ಇಲ್ಲಿ ಬರುವುದಿಲ್ಲ. ಕ್ರಿಸ್ತ ಸೇಟನ್ ತಂದೊಡ್ಡುವ ಎಲ್ಲ ಬಗೆಯ ಕಡೆಗೆ ಮಿತ್ರವೇಷಿ ಪ್ರಲೋಭನೆಗಳನ್ನು ಎದುರಿಸಿ ತನ್ನ ದೈವಭಕ್ತಿ ವಿಧೇಯತೆ, ಶೀಲ ಸಂಯಮಗಳಿಂದ ಗೆಲ್ಲುತ್ತಾನೆ. ಪ್ರೇಮ, ಕರುಣೆ, ಎಲ್ಲರ ಒಳಿತಿಗೆ ಯಾವ ಸಂಕಟವನ್ನಾದರೂ ಸ್ವೀಕರಿಸುವ ಸ್ವಭಾವ, ಎಂಥ ಸಂದರ್ಭದಲ್ಲೂ ಶಾಂತವಾಗಿ ವಿವೇಕದಿಂದ ನಡೆದುಕೊಳ್ಳುವ ಸ್ಥಿರಚಿತ್ತ ಈತನ ದೈವೀಕತೆಯನ್ನು ಪ್ರಕಟಗೊಳಿಸುತ್ತವೆ. ಕಾವ್ಯದ ಭಾಷೆ ಸರಳವಾದುದು. ಪ್ಯಾರಡೈಸ್ ಲಾಸ್ಟ್ ಕಾವ್ಯದ ಕಾವು ಇದರಲ್ಲಿ ಇಲ್. ಆದರೆ ಕವಿಯ ಉತ್ಕಟ ಧರ್ಮನಿಷ್ಠೆ ಇಲ್ಲಿ ಚೆನ್ನಾಗಿ ಮೂಡಿದೆ.

ಕವಿಗೆ ಬೈಬಲ್ ಮತ್ತಿ ಕ್ರೈಸ್ತ ಧಾರ್ಮಿಕಶ್ರದ್ಧೆಗಳ ಎದುರು ಗ್ರೀಕ್ ಜ್ಞಾನ ಸಂಪತ್ತು ಬಲು ಸಣ್ಣದಾಗಿ ತೋರುತ್ತದೆ. ಆದರೆ ಮಿಲ್ಟನ್ ಗ್ರೀಕ್ ವಿರೋಧಿ ಅಲ್ಲ ಎಂಬುದಕ್ಕೆ ಗ್ರೀಕ್ ರುದ್ರನಾಟಕದ ಮಾದರಿಯಲ್ಲಿ ಸ್ಯಾಮ್ಸನ್ ಆಗೋನಿಸ್ಟಸ್ ಎಂಬ ನಾಟಕವನ್ನು ರಚಿಸಿರುವುದೇ ಸಾಕ್ಷಿ. ಇದು ಇಂಗ್ಲಿಷಿನ ಶ್ರೇಷ್ಠ ಕಾವ್ಯ ನಾಟಕ. ಸಾಫೊಕ್ಲಿಸ್‍ನ ಈಡಿಪಸ್. ಈಸ್ಕೈಲಸ್‍ನ ಪ್ರೊಮೀಥಿಯಸ್ ಬೌಂಡ್ ನಾಟಕಗಳನ್ನು ನೆನಪಿಗೆ ತರುವ ನಾಟಕವನ್ನು ಬರೆದು ಮಿಲ್ಟನ್ ಪ್ರಾಚೀನರ ಸಾಲಿನಲ್ಲಿ ನಿಲ್ಲುತ್ತಾನೆ. ಪುರಾಣಕತೆಯಲ್ಲಿ ಬರುವ ಸ್ಯಾಮ್ಸನ್ ಭೀಮಕಾಯನಾದ ದಸ್ಯು. ಆದರೆ ಇಲ್ಲಿ ಹೀಬ್ರೂಲಕ್ಷಣದ. ಸಾಕ್ರಟೀಸ್‍ನಂತೆ ಶಾಂತಚಿತ್ತನಾದ ನಾಯಕ. ಸ್ವಾರ್ಥ, ಅಹಂಕಾರರಹಿತನಾಗಿ ದುಃಖ ದೈನ್ಯ. ಅಪಮಾನಗಳನ್ನು ದಾಟಿ ಆತ್ಮಶಕ್ತಿಯನ್ನು ಪಡೆಯುವನು. ಕ್ರಿಸ್ತನಂತೆ ಅಂತರ್ಮುಖಿಯೂ ಏಕಾಂತಪ್ರಿಯನೂ ಆಗಿದ್ದಾನೆ. ರಚನೆಯಲ್ಲಿ ಸಂಯಮ. ವಸ್ತುನಿಷ್ಠ ದೃಷ್ಟಿ ಕಾಣುತ್ತದೆ.

ಮಿಲ್ಟನನ ಸಾಹಿತ್ಯ ಕುರಿತಂತೆ ಇಂಗ್ಲಿಷ್ ಸಾಹಿತ್ಯವಿಮರ್ಶೆ ವಿಭಿನ್ನ ಬಗೆಯವಾಗಿವೆ. ಡ್ರೈಡನ್, ಅಡಿಸನ್, ಹ್ಯಾಜ್ಲಿಟ್, ಕೋಲರಿಜ್, ಕೀಟ್ಸ್, ಷೆಲ್ಲಿ, ಬ್ಲೇಕ್, ಲ್ಯಾಂಡರ್, ಮೆಕಾಲ್, ಎಮರ್ಸನ್, ಬೇಜ್‍ಹಾಟ್, ಮಾರ್ಕ್ ಪ್ಯಾಟಿಸನ್, ಎಲಿಯಟ್, ಎಜ್ರಾಪೌಂಡ್ ಮಿಲ್ಟನನ ವಿಮರ್ಶಕರಲ್ಲಿ ಹೆಸರಾದವರು. ಜೇಮ್ಸ್‍ಥಾರ್ಪ್ 1940ರಲ್ಲಿ ನಾಲ್ಕು ಶತಮಾನಗಳಲ್ಲಿ ಬೆಳೆದು ಬಂದ ಮಿಲ್ಟನ್ ಕಾವ್ಯದ ವಿಮರ್ಶೆ ಎಂಬ ಗ್ರಂಥವನ್ನು ಹೊರತಂದ. ಕಟುವಿಮರ್ಶೆಗೆ ಗುರಿಯಾಗಿದ್ದ ಮಿಲ್ಟನ್ ಮತ್ತೆ ಮೆಚ್ಚುಗೆಗೆ ಪಾತ್ರನಾಗಿರುವ ಮಾತಿರಲಿ ಅವನ ಕೀರ್ತಿ ಪ್ರಭಾವಗಳು ಇಂಗ್ಲಿಷ್ ಸಾಹಿತ್ಯ ಸಂಸ್ಕøತಿಗಳ ಇತಿಹಾಸ ಭಾಗವಾಗಿದೆ.

ಇಂಗ್ಲಿಷ್ ಛಂದೋವೈವಿಧ್ಯಕ್ಕೆ ಮಿಲ್ಟನ್ ತಂದ ಶ್ರೀಮಂತಿಕೆಯನ್ನು ಅವನಿಂದೀಚೆಗೆ ಹೆಚ್ಚಿಸಿದವರು ಯಾರೂ ಇಲ್ಲ. ಇಂಗ್ಲಿಷ್ ಕಾವ್ಯಲೋಕದಲ್ಲಿ ಮೂವರು ಅತ್ಯಂತ ಶ್ರೇಷ್ಠ ಕವಿಗಳನ್ನು ಅಯಬೇಕಾಗಿ ಬಂದರೆ ಷೇಕ್ಸ್ ಪಿಯರ್, ಮಿಲ್ಟನ್ ಮತ್ತು ವಡ್ರ್ಸ್‍ವರ್ತ್‍ರನ್ನೇ ಹೆಸರಿಸುವುದು ಸಹಜ. 	(ಕೆ.ಬಿ.ಪಿ.)

ಏರಿಯೊ ಪೆಜಿಟಿಕ: ಇಂಗ್ಲೆಂಡಿನ ಸಂಸತ್ತು ನಿಯಮಿಸಿದ ಪರೀಕ್ಷಕನ ಅನುಮತಿ ಇಲ್ಲದೆ ಯಾವ ಪುಸ್ತಕವೂ ಪ್ರಕಟವಾಗಕೂಡದೆಂಬ ಶಾಸನವನ್ನು ವಿರೋಧಿಸಿ ಶ್ರೀಮಂತ ಸಭೆ ಮತ್ತು ಕಾಮನ್ಸ್ ಸಭೆಗಳನ್ನು ಉದ್ದೇಶಿಸಿ ಮಿಲ್ಟನ್ ಇಂಗ್ಲಿಷಿನಲ್ಲಿ ಬರೆದ ಗದ್ಯಕೃತಿ (1644). ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕೆಂದು ಇಲ್ಲಿ ವಾದಿಸಲಾಗಿದೆ. ದೇವರು ಮನುಷ್ಯನಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಿದ್ದಾನೆ. ಕೆಟ್ಟದ್ದನ್ನು ಅರಿತು ಸ್ವಇಚ್ಛೆಯಿಂದ ಅದನ್ನು ತಿರಸ್ಕರಿಸಿ ಒಳ್ಳೆಯದನ್ನು ಅಯುವುದೇ ಮನುಷ್ಯನ ವಿವೇಕದ ಲಕ್ಷಣ ಎಂದು ಮಿಲ್ಟನ್ ಮಾನವನ ನೈತಿಕಹೊಣೆಯನ್ನು ಸಾರುತ್ತಾನೆ. ಪ್ರತಿಯೊಂದು ವಿಷಯವನ್ನೂ ವಿಮರ್ಶಿಸಿ ಸರಿಯಾದ ತೀರ್ಮಾನಕ್ಕೆ ಬರುವ ಅರ್ಹತೆ ಪ್ರತಿ ಓದುಗನಿಗೂ ಉಂಟು. ಎಲ್ಲ ಸಂಗತಿಗಳನ್ನೂ ಪರೀಕ್ಷಿಸಿ ನೋಡಿ ಬೆಲೆಕಟ್ಟಿ ಒಳ್ಳೆಯದರಲ್ಲಿ ವಿಶ್ವಾಸವಿಡುವುದು ಮನುಷ್ಯನ ಕರ್ತವ್ಯ. ಕಲುಷಿತವಾಗಿಲ್ಲದ ಮನಸ್ಸನ್ನು ತಿಳಿವಳಿಕೆ ಕಲುಷಿತಗೊಳಿಸಬಾರದು: ಏಕಾಂತವಾಸಿಯಾಗಿ ಇರುವವನ ಬದುಕು ಮಚ್ಚಿಕೆಗೆ ಅರ್ಹವಾದುದಲ್ಲ ಎನ್ನುತ್ತಾನೆ ಮಿಲ್ಟನ್. ಒಂದು ಉತ್ತಮಗ್ರಂಥವೆಂದರೆ ಜೀವನದಾಚೆಗಿನ ರಕ್ಷಿಸಿ ನಿಧಿಯಂತೆ ಕಾಯ್ದಿರಿಸಿದ ಒಂದು ಮಹಾಚೇತನದ ಜೀವರಕ್ತ ಎಂದು ಪ್ರಶಂಸೆ ಮಾಡುತ್ತಾನೆ.

ಅಭಿಪ್ರಾಯನಿರೂಪಣೆಯ ಸ್ವಾತಂತ್ರ್ಯ ಹೋರಾಟ ಚರಿತ್ರೆಯಲ್ಲಿ ಈ ಕೃತಿಗೆ ಹಿರಿಯ ಸ್ಥಾನ ಉಂಟು. ತರ್ಕಭಾವನೆಗಳ ಉದಾತ್ತತೆ. ಬೌದ್ಧಿಕ ಪ್ರಾಮಾಣಿಕತೆ, ಶೈಲಿಯ ಗಾಂಭೀರ್ಯಗಳಿಂದ ಇದು ಭವ್ಯಕೃತಿಯಾಗಿದೆ. ವಸ್ತುವಿಗೆ ತಕ್ಕ ಮಹೋನ್ನತ ಶೈಲಿಯನ್ನು ಮಿಲ್ಟನ್ ಸಾಧಿಸಿದ್ದಾನೆ. ಕೃತಿಯ ಕಡೆಯ ಭಾಗದಲ್ಲಿ ಕವಿಯ ದೇಶಪ್ರೇಮದ ಸ್ಪೂರ್ತಿದಾಯಕ ನಿರೂಪಣೆ ಇದೆ. ಮನುಷ್ಯನ ಚೇತನ ಎಷ್ಟು ಎತ್ತರದಲ್ಲಿ ಹೋಗಬಲ್ಲದೋ ಆ ಎತ್ತರವನ್ನೂ ಮುಟ್ಟಬಲ್ಲನಾಡು ಇಂಗ್ಲೆಂಡ್ ಎಂದು ವರ್ಣಿಸಿ. ಎಲ್ಲ ದೇಶಗಳೂ ವಿಸ್ಮಯಗೊಳ್ಳುವಂಥ ಸಾಧನೆಯತ್ತ ಅದು ಸಾಗುತ್ತದೆ ಎನ್ನುವ ದೃಢನಂಬಿಕೆಯನ್ನು ವ್ಯಕ್ತಪಡಿಸುತ್ತಾನೆ.

ಸ್ಯಾಮ್‍ಸನ್ ಆಗೋನಿಸ್ಟಸ್ ಮಿಲ್ಟನ್ ಬರೆದ ಪ್ರಾಚೀನ ಸಾಹಿತ್ಯ ಸಂಪ್ರದಾಯದ ನಾಟಕ (1671). ಆಗೋನಿಸ್ಟಸ್ ಎಂದರೆ ಮಲ್ಲ. ಕುಸ್ತಿಮಾಡುವವ ಎಂದರ್ಥ. ಕ್ರೂರಿಗಳಾದ ಫಿಲಿಸ್ಟೈನರ ಗುಲಾಮರಾಗಿದ್ದ ಇಸ್ರೆಲೈಟರ್ ಉದ್ಧಾರಕ್ಕಾಗಿ ಹುಟ್ಟಿದ ಅಸಮಾನ ಬಲಶಾಲಿ ಸ್ಯಾಮ್‍ಸನ್ ಎಂಬಾತ ಡ್ಯಾಲಿಲ ಎಂಬ ಫಿಲಿಸ್ಟೈನ್ ಸ್ತ್ರೀಯಲ್ಲಿ ಮೋಹಗೊಂಡು ತನ್ನ ಶಕ್ತಿ ತನ್ನ ಕೂದಲಿನಲ್ಲಿದೆ ಎಂಬ ರಹಸ್ಯವನ್ನು ಆಕೆಗೆ ತಿಳಿಸಿ. ಅವಳ ದ್ರೋಹದಿಂದ ಶತ್ರುಗಳ ಕೈಗೆ ಸಿಕ್ಕ ಸೆರೆಯಾಳಾಗಿ ಕಣ್ಣುಗಳನ್ನು ಕಳೆದುಕೊಂಡು ಕಡೆಗೆ ವಿಜಯೋತ್ಸವದಲ್ಲಿ ಮೈಮರೆತಿದ್ದ ಶತ್ರುಗಳ ಮೇಲೆ ಅವರಿದ್ದ ಮುಂದಿರದ ಚಾವಣಿಯನ್ನು ಕೆಡವಿ ಅವರೊಂದಿಗೆ ತಾನೂ ಹತನಾದನೆಂಬ ಕಥೆ ಬೈಬಲ್‍ನ ಬುಕ್ ಆಫ್ ಜಡ್ಜಸ್‍ನಲ್ಲಿ ಬರುತ್ತದೆ. ನಿರಂಕುಶ ರಾಜ ಪ್ರಭುತ್ವದಿಂದ ಬಿಡುಗಡೆ ಹೊಂದಿ ಜಗತ್ತಿಗೆ ಆದರ್ಶವಾಗಬೇಕಾಗಿದ್ದ ಇಂಗ್ಲೆಂಡ್ ತಾನೇ ತನ್ನ ಅವನತಿಯನ್ನು ತಂದುಕೊಂಡಿತೆಂಬ ವ್ಯಥೆ. ತನ್ನ ಮೊದಲನೆಯ ವಿವಾಹದ ಕಹಿ ಅನುಭವ, ತಾನು ಗೌರವಿಸಿದ ನಾಯಕರ ಅವಹೇಳನ ಕಂಡು ಶತ್ರುಗಳ ಮಧ್ಯೆ ಕಣ್ಣು ಕಳೆದುಕೊಂಡು ಅವರ ಭೋಗವಿಲಾಸ ತುಂಬಿದ ವೈಭವವನ್ನು ನೋಡುತ್ತ ನರಳುವ ಸ್ಥಿತಿ-ಇವೆಲ್ಲ ಮಿಲ್ಟನ್‍ನನ್ನು ಸ್ಯಾಮ್‍ಸನ್‍ನ ಕಥೆಯತ್ತ ಸೆಳೆದವು. ಭಗವಂತನ ಸರ್ವಜ್ಞತೆ ಮತ್ತು ನ್ಯಾಯದಲ್ಲಿ ದೃಢನಂಬಿಕೆ ಇಲ್ಲಿ ಅಭಿವ್ಯಕ್ತಿ ಪಡೆದಿದೆ

ಇಲ್ಲಿ ಮಿಲ್ಟನ್ ಪ್ರಾಚೀನ ಗ್ರೀಕ್‍ನಾಟಕ ಸಂಪ್ರದಾಯವನ್ನು ಅನುಸರಿಸಿದ್ದಾನೆ. ನಾಟಕ ಪ್ರಾರಂಭವಾಗುವಾಗ ಸ್ಯಾಮ್‍ಸನ್ ಆಗಲೇ ಕಣ್ಣುಗಳನ್ನು ಕಳೆದುಕೊಂಡ ನಿರಾಸೆಯಲ್ಲಿ ಮುಳುಗಿ ದುಃಖಿಸುತ್ತಿರುತ್ತಾನೆ. ಅವನ ಮಿತ್ರರÀು ಇಲ್ಲಿ ಮೇಳದವರು. ಅವರು ಅವನ ಸ್ವಾಗತ ಭಾಷಣದ ಅನಂತರ ಪ್ರವೇಶಿಸುತ್ತಾರೆ. ಅವನ ತಂದೆ ಮಾನೊ ಆ. ದ್ರೋಹವೆಸಗಿದ ಡ್ಯಾಲಿಲ, ಶತ್ರುಪಕ್ಷದ ಮಲ್ಲ ಹ್ಯಾರಫ ಹೀಗೆ ಒಬ್ಬರಾದ ಮೇಲೊಬ್ಬರೊಂದಿಗೆ ಅವನು ಸಂಭಾಷಿಸುತ್ತಾನೆ. ಮೇಳದವರೊಂದಿಗೆ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಕಡೆಯಲ್ಲಿ ಅವನ ಸಾವನ್ನು ದೂತನೊಬ್ಬ ವರ್ಣಿಸುತ್ತಾನೆ. ಅವನ ಸಾವಿಗಾಗಿ ಎದೆ ಬಡಿದುಕೊಂಡು ರೋಧಿಸುವ ಅಗತ್ಯವಿಲ್ಲ. ಅವನ ಜೀವನದ ಗುರಿ ಸಫಲವಾಯಿತು. ಎನ್ನುವ ಮಾನೊ ಅನಸಮಾಧಾನದ ನುಡಿಯೊಂದಿಗೆ ನಾಟಕ ಮುಕ್ತಯವಾಗುತ್ತದೆ. ಪ್ರಾಚೀನ ಗ್ರೀಕ್ ನಾಟಕದ ಚೇತನವನ್ನು ಮಿಲ್ಟನ್ ಇಲ್ಲಿ ಸೆರೆಹಿಡಿದಿದ್ದಾನೆ. ಆ ನಾಟಕಗಳನ್ನು ಓದಲಾಗದವರು ಇವನ್ನು ಓದಿ ಆ ಸಂಪ್ರದಾಯವನ್ನು ಅರ್ಥಮಾಡಿಕೊಳ್ಳಬಹುದು. ಕಾಲ ಮತ್ತು ಐಕ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಕಿಟಕಿ ವಿಡಂಬನೆಗಳನ್ನು ಬಳಸಿದರೂ ಶುದ್ಧಹಾಸ್ಯಗಳನ್ನು ದೂರವಿಡುತ್ತಾನೆ. ಬೈಬಲಿನಿಂದ ಆಯ್ದು ಕಥೆಗೆ ಪ್ರಾಚೀನ ಗ್ರೀಕ್‍ನಾಟಕ ಸಂಪ್ರದಾಯದ ರೂಪಕೊಟ್ಟು ಅದರಲ್ಲಿ ತನ್ನ ವೈಯಕ್ತಿಕ ಜೀವನ, ಸಮಕಾಲೀನ ಸಮಾಜದ ಜೀವನ, ನಾಡಿನ ಚರಿತ್ರೆ ಇವನ್ನು ಪ್ರತಿಬಿಂಬಿಸಿ ಸಾಧಿಸಿ ಮಿಲ್ಟನ್ ಪವಾಡವೆಸಗಿದ್ದಾನೆ. ಭೌತಿಕ ಕ್ರಿಯೆಗಿಂತ ಮಾನಸಿಕ ಕ್ರಿಯೆಗೆ ಪ್ರಾಧಾನ್ಯ ನೀಡಿ ಮಿಲ್ಟನ್ ಷೇಕ್ಸ್‍ಪಿಯರನ ಹಾದಿಯಲ್ಲಿ ಇನ್ನೂ ಮುಂದೆ ಸಾಗಿದ್ದಾನೆ. ಜಾನ್‍ಸನ್‍ನಂಥ ವಿಮರ್ಶಕರು ಇಲ್ಲಿ ಕ್ರಿಯೆಗೆ ಆದಿ ಮಧ್ಯ ಅಂತ್ಯಗಳು ಸ್ಪಷ್ಟವಾಗಿಲ್ಲ ಎಂದು ಟೀಕಿಸಿದ್ದಾರೆ. ಆದರೆ ನಿರಾಸೆಯ ಆಳದಿಂದ ದೈವ ಸಂಕಲ್ಪದಲ್ಲಿ ಮತ್ತು ಭಗವಂತನ ನ್ಯಾಯ, ಕರುಣೆಗಳಲ್ಲಿ ದೃಢವಿಶ್ವಾಸದ ಶಿಖರಕ್ಕೆ ಸ್ಯಾಮ್ಲನ್‍ನ ಚೇತನ ಏರುವುದನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾನೆ ನಾಟಕದಾರ. ಪ್ರತಿಪಾತ್ರವೂ ಅವನ ಮಾನಸಿಕ ಪ್ರಗತಿಯಲ್ಲಿ ಸರಿಯಾದ ಅತ್ಯಗತ್ಯವಾದ ಘಟ್ಟದಲ್ಲಿ ಕಾಲಿಡುತ್ತದೆ. ಈ ಕೃತಿಗೆ ಮಿಲ್ಟನ್ ಬರೆದ ಚಿಕ್ಕ ಮುನ್ನುಡಿಯಲ್ಲಿ ದುರಂತನಾಟಕದ ಕಾಲಿಡುತ್ತದೆ. ಈ ಕೃತಿಗೆ ಮಿಲ್ಟನ್ ಬರೆದ ಚಿಕ್ಕ ಮುನ್ನುಡಿಯಲ್ಲಿ ದುರಂತನಾಟಕದ ಬಗೆಗೆ ಅಡುವ ಮಾತುಗಳು ಗಮನಾರ್ಹವಾದವು. ಈ ನಾಟಕದಲ್ಲಿ ಪ್ರಾಸರಹಿತ ಪದ್ಯ ಬಳಸಿದ್ದಾನೆ. ಇಲ್ಲಿ ಮಿಲ್ಟನ್‍ನ ಪರಿಣಿತ ಶೈಲಿಯನ್ನು ಕಾಣಬಹುದು.	    	
	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ